ಜರಗು -
ಬೆಟ್ಟದ ಅಥವಾ ಪ್ರಪಾತದ ಕಡಿದಾದ ಪಕ್ಕದ ಶಿಲೆಯ ಮೇಲ್ಭಾಗ ಗಾಳಿ, ಮಳೆ, ನೀರು ಹಿಮಗಳ ಹಾವಳಿಯಿಂದ ಸಡಿಲಗೊಂಡು ತಲೆದೋರುವ ಚೂಪಾದ ಬಂಡೆಗಳೂ ಬೂರುಗಳೂ ಜಾರಿ ಉರುಳಿಕೊಂಡು ಕೆಳಕ್ಕೆ ಬಂದು ಹರಡಿಕೊಂಡಿರುವ ಭಾಗ (ಸ್ಲೈಡ್ ರಾಕ್). ಇದರಲ್ಲಿ ಮಣ್ಣು ಕಡಿಮೆ. ಕಲ್ಲುಗಳ ಗಾತ್ರ 5 ಮೀ ಅಗಲದ ದೊಡ್ಡ ಬಂಡೆಗಳಿಂದ ಖನಿಜದಕಣದವರೆಗೂ ಇರಬಹುದು. ಸಾಮಾನ್ಯವಾಗಿ ಹೊಚ್ಚ ಹೊಸ ಶಿಲಾಖಂಡಗಳು ಮೇಲ್ಗಡೆ ಇರುತ್ತವೆ; ಕಾಲಗತಿಯಲ್ಲಿ ಇವು ಕೂಡ ಚೂರು ಚೂರಾಗಿ ಕೆಳಕ್ಕೆ ಜಾರಿಕೊಂಡು ಬರುತ್ತವೆ. ಹಿಮ ಬೀಳುವ ಪ್ರದೇಶಗಳಲ್ಲಿ ಜರುಗು ವಸಂತಋತುವಿನಲ್ಲಿ ಅಧಿಕವಾಗಿ ಶೇಖರವಾಗುವುದು. ಜರುಗು ಕೆಳಕ್ಕೆ ಸರಿದಂತೆ ಅದರ ಒತ್ತಡದಿಂದ ಮರಗಳು ಮುರಿದು ಬೀಳುವುದುಂಟು; ನದಿಗಳಿಗೆ ಅಣೆಕಟ್ಟಿದಂತಾಗಿ ಸರೋವರಗಳು ಉತ್ಪತ್ತಿಯಾಗುವುದುಂಟು. ತೇವವಿರುವ ಪ್ರದೇಶದಲ್ಲಿ ಬಹು ಸೂಕ್ಷ್ಮವಾದ, ಫಲವತ್ತಾದ ಮತ್ತು ಸಸ್ಯಾವೃತವಾದ ಮಣ್ಣು ಬೆಟ್ಟದ ಅಡಿಯಲ್ಲಿ ಶೇಖರವಾಗುತ್ತದೆ. ಪ್ರಪಾತದ ಅಥವಾ ಪರ್ವತ ಝರಿಗಳ ಅಡಿಯಲ್ಲಿ ವಿಶೇಷವಾಗಿ ಶಂಕುವಿನ ಆಕಾರದಲ್ಲಿ ಜರುಗು ಶೇಖರಣವಾಗುತ್ತದೆ. ಹಿಮಾವೃತ ಪ್ರದೇಶಗಳಲ್ಲಿ ಮಂಜು ಕರಗಿ ನೀರಾದ ಬಳಿಕ ಜರುಗು ಬಹಳ ದೂರದವರೆಗೆ ಕೊಚ್ಚಿಕೊಂಡು ಬಂದು ಶೇಖರಣವಾದಾಗ ಇದು ಅಲ್ಲಿಗೆ ಹೇಗೆ ಬಂದಿತು ಎಂಬ ಸಮಸ್ಯೆಯನ್ನು ನೋಡುವವರ ಮುಂದಿಡುತ್ತದೆ.
(ಎ.ಎನ್.ಎಸ್.ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ